ಚರಿತ್ರೆ

ಮೈಸೂರಿನ ರಾಜಪ್ರತಿನಿಧಿಯಾದ ಘನತೆವೆತ್ತ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರು ಹೆಬ್ಬಾಳದಲ್ಲಿ ಪ್ರಾಯೋಗಿಕ ಕೃಷಿ ಕೇಂದ್ರ ಸ್ಥಾಪಿಸಲು 30 ಎಕರೆ ಜಮೀನನ್ನು 1899ರಲ್ಲಿ ಕೊಡುಗೆಯಾಗಿ ನೀಡಿದರು ಮತ್ತು ಕೃಷಿ ನಿರ್ದೇಶನಾಲಯದಲ್ಲಿನ ಪ್ರಯೋಗಾಲಯದೊಂದಿಗೆ ಮಣ್ಣು ಬೆಳೆ ಪ್ರತಿಕ್ರಿಯೆ ಕುರಿತ ಸಂಶೋಧನೆ ಪ್ರಾರಂಭಿಸಲು ಜರ್ಮನ್ ವಿಜ್ಞಾನಿ ಡಾ. ಲೆಹ್‌ಮನ್‌ರವರನ್ನು ನೇಮಕ ಮಾಡಿದರು. ನಂತರ 1906ರಲ್ಲಿ ಡಾ.ಲೆಹ್‌ಮನ್‌ರವರ ನಂತರ ಕೆನಡಾದ ಕೀಟಶಾಸ್ತ್ರಜ್ಞ ಡಾ. ಲೆಸ್ಲೀ ಕೋಲ್ಮನ್‌ರವರು ಅಧಿಕಾರ ವಹಿಸಿಕೊಂಡರು ಮತ್ತು ಅತ್ಯುತ್ಸಾಹದಿಂದ 25 ವರ್ಷಗಳು ಸೇವೆ ಸಲ್ಲಿಸಿದರು. 30 ಎಕರೆ ತರಿಭೂಮಿಯನ್ನೊಳಗೊಂಡಂತೆ 808 ಮಿ.ಮೀ. ಮಳೆ ಬೀಳುವ 202 ಎಕರೆ ಭೂಮಿಯನ್ನು ಪ್ರಾಯೋಗಿಕ ಕೇಂದ್ರಕ್ಕೆ ಹಂಚಿಕೆ ಮಾಡಲಾಯಿತು. ಮೈಸೂರಿನ ಆಗಿನ ದಿವಾನರಾಗಿದ್ದ (1912-1919) ಸರ್ ಎಂ.ವಿಶ್ವೇಶ್ವರಯ್ಯನವರು 1913ರಲ್ಲಿ ಹೆಬ್ಬಾಳದಲ್ಲಿ ಮೈಸೂರು ಕೃಷಿ ವಸತಿ ಶಾಲೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಮೈಸೂರಿನ ಮೊಟ್ಟಮೊದಲ ಕೃಷಿ ನಿರ್ದೇಶಕರಾಗಿದ್ದ ಡಾ.ಲೆಸ್ಲೀ ಕೋಲ್‌ಮನ್‌ರವರನ್ನು ವಾರ್ಷಿಕ 15 ವಿದ್ಯಾರ್ಥಿಗಳಿಗೆ ಲೈಸೆನ್ಶಿಯೇಟ್ ಇನ್ ಅಗ್ರಿಕಲ್ಚರ್ (ಎಲ್.ಎ.ಜಿ.) ವ್ಯಾಸಂಗ ನೀಡಲು ಶಾಲೆಗೆ ಮುಖ್ಯಸ್ಥರನ್ನಾಗಿ ಸಹ ನೇಮಿಸಿದರು. 1946ರಲ್ಲಿ : ಶ್ರೀ ಎಂ.ಎ.ಶ್ರೀನಿವಾಸನ್ ಕೃಷಿ ಸಚಿವರು ಹೆಬ್ಬಾಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಡಿಯಲ್ಲಿ ನಾಲ್ಕು ವರ್ಷಗಳ ಕೃಷಿ ವೃತ್ತಿಪರ ಸ್ನಾತಕ ಪದವಿ ನೀಡುವ ಕೃಷಿ ಕಾಲೇಜು ಸ್ಥಾಪಿಸುವ ಆಸಕ್ತಿ ತೋರಿದರು. ಶ್ರೀ ಕೆಂಗಲ್ ಹನುಮಂತಯ್ಯ, ಮುಖ್ಯ ಮಂತ್ರಿಗಳು ಕೃಷಿ ಕಾಲೇಜಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿ 25ನೇ ಜನವರಿ 1956ರಂದು ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದರು. ಭಾರತ ಸರ್ಕಾರವು 1961ರಲ್ಲಿ ರಾಕ್ ಫೆಲ್ಲರ್ ಫೌಂಡೇಶನ್ನಿನ ಡಾ|| ರಾಲ್ಫ್ ಕಮ್ಮಿಂಗ್ಸ್ ರವರ ನೇತೃತ್ವದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸಮಿತಿಯೊಂದನ್ನು ರಚಿಸಿತು. ಆ ಸಮಿತಿಯು ಬೆಂಗಳೂರಿನ ಹೆಬ್ಬಾಳಕ್ಕೆ 1961ರ ಜೂನ್ ನಲ್ಲಿ ಭೇಟಿ ನೀಡಿ ಹೆಬ್ಬಾಳದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಶಿಫಾರಸ್ಸು ಮಾಡಿ ವರದಿಯೊಂದನ್ನು ಸಲ್ಲಿಸಿತು. ಮುಖ್ಯ ಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪನವರ ನೇತೃತ್ವದ ಮೈಸೂರು ಸರ್ಕಾರವು 1963ರ ಏಪ್ರಿಲ್ ನಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಅಮೆರಿಕದ ಲ್ಯಾಂಡ್ ಗ್ರಾಂಟ್ ಕಾಲೇಜ್ ವ್ಯವಸ್ಥೆಯ ರೀತಿಯಲ್ಲಿಯೇ ಸ್ಥಾಪಿಸಲು ನಿರ್ಧರಿಸಿ ಕೃಷಿ ವಿಶ್ವವಿದ್ಯಾನಿಲಯಗಳ ವಿಧೇಯಕದ (ಅಧಿನಿಯಮ ಸಂ.22) ಠರಾವು ಹೊರಡಿಸಿತ ಹಾಗೂ ಅದಕ್ಕೆ 1963ರ ಮೇ 25ರಂದು ಭಾರತದ ರಾಷ್ಟ್ರಪತಿಗಳ ಅನುಮೋದನೆ ದೊರೆತು ಅದಕ್ಕೆ ಕಾನೂನಿನ ಮಾನ್ಯತೆ ದೊರೆಯಿತು. ಮುಖ್ಯ ಮಂತ್ರಿಗಳು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣಕ್ಕೆ 1300 ಎಕರೆ ಭೂಮಿಯನ್ನು ಮಂಜೂರು ಮಾಡಿದರು. ಸರ್ಕಾರವು ಯು.ಎಸ್.ಎ.ಐ.ಡಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ|| ಕೆ.ಸಿ.ನಾಯಕ್, ಎಂ.ಎಸ್ಸಿ., ಪಿಎಚ್.ಡಿ (ಬ್ರಿಸ್ಟಲ್) ಇವರನ್ನು ಮೊದಲನೆಯ ಕುಲಪತಿಗಳಾಗಿ 1964ರ ಜೂನ್ 12ರಂದು ನೇಮಕ ಮಾಡಿತು. 
ಕೃಷಿ ವಿಶ್ವವಿದ್ಯಾನಿಲಯವನ್ನು 1964ರ ಆಗಸ್ಟ್ 21ರಂದು ಭಾರತದ ಉಪರಾಷ್ಟ್ರಪತಿಗಳಾದ ಡಾ|| ಜಾಕಿರ್ ಹುಸೇನ್ ರವರು ಭಾರತದ ಅಮೆರಿಕದ ರಾಯಭಾರಿಗಳಾದ ಶ್ರೀ ಚೆಸ್ಟರ್ ಬೌಲ್ಸ್ ಹಾಗೂ ಮುಖ್ಯ ಮಂತ್ರಿಗಳಾದ ಶ್ರೀ ಎಸ್.ನಿಜಲಿಂಗಪ್ಪನವರ ಸಮಕ್ಷಮದಲ್ಲಿ ಉದ್ಘಾಟಿಸಿದರು. 1969ರಲ್ಲಿ : ಶ್ರೀಮತಿ ಇಂದಿರಾ ಗಾಂಧಿ, ಪ್ರಧಾನ ಮಂತ್ರಿಗಳು 1969ರ ಜುಲೈ 12ರಂದು ಜಿ.ಕೆ.ವಿ.ಕೆ. ಆವರಣವನ್ನು ಉದ್ಘಾಟಿಸಿದರು.
1958ರಲ್ಲಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಯಿತು. 1965ರ ಅಕ್ಟೋಬರ್‍ 1ರಂದು, ರಾಜ್ಯ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳ ಆಡಳಿತದಲ್ಲಿದ್ದ ಹೆಬ್ಬಾಳ ಮತ್ತು ಧಾರವಾಡಗಳಲ್ಲಿನ ಕೃಷಿ ಕಾಲೇಜುಗಳು, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು, ಕರ್ನಾಟಕದ ಎಲ್ಲೆಡೆ ಇರುವ 35 ಸಂಶೋಧನಾ ಕೇಂದ್ರಗಳು ಮತ್ತು 45 ಭಾರತೀಯ ಕೃಷಿ ಅನುಸಂಧಾನ ಪರಿಷತ್ ಯೋಜನೆಗಳನ್ನು ಹೊಸದಾಗಿ ಸ್ಥಾಪಿತವಾದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಲಾಯಿತು. ನಂತರ, ಮಂಗಳೂರಿನಲ್ಲಿದ್ದ ಸಾಗರ ಉತ್ಪನ್ನ ಸಂಸ್ಕರಣಾ ತರಬೇತಿ ಕೇಂದ್ರ (ಎಂ.ಪಿ.ಪಿ.ಟಿ.ಸಿ.) ಹಾಗೂ ಧಾರವಾಡ ಜಿಲ್ಲೆಯ ಹನುಮನಮಟ್ಟಿಯಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಲಾಯಿತು.
ವಿಶ್ವವಿದ್ಯಾನಿಲಯವು ಮೀನುಗಾರಿಕೆ ವಿಜ್ಞಾನ ತರಬೇತಿ ನೀಡಲು 1969ರಲ್ಲಿ ಮಂಗಳೂರಿನಲ್ಲಿ ಮೀನುಗಾರಿಕೆ ಕಾಲೇಜು ಮತ್ತು ಕೃಷಿ ಇಂಜಿನಿಯರಿಂಗ್ ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ನೀಡಲು ರಾಯಚೂರಿನಲ್ಲಿ ಕೃಷಿ ಇಂಜಿನಿಯರಿಂಗ್ ಸಂಸ್ಥೆಗಳನ್ನು ವಿಶ್ವವಿದ್ಯಾನಿಲಯವು ಸ್ಥಾಪಿಸಲಾಯಿತು.
ಗ್ರಾಮೀಣ ಗೃಹ ವಿಜ್ಞಾನದಲ್ಲಿ ಶಿಕ್ಷಣ ನೀಡಲು ಧಾರವಾಡ ಆವರಣದಲ್ಲಿ ಗೃಹ ವಿಜ್ಞಾನ ಕಾಲೇಜನ್ನು 1974ರಲ್ಲಿ ಹಾಗೂ ಹೆಬ್ಬಾಳದಲ್ಲಿ ಮೂಲ ವಿಜ್ಞಾನಗಳ ಹಾಗೂ ಮಾನವಿಕ ಮತ್ತು ಸ್ನಾತಕೋತ್ತರ ಅಧ್ಯಯನಗಳ ಕಾಲೇಜನ್ನು ಸ್ಥಾಪಿಸಲಾಯಿತು.

Additional information